ಸಿಡಿ ಪ್ರಕರಣ; ಅಮಿತ್ ಶಾ
ಭೇಟಿಯಾದ ರಮೇಶ್ ಜಾರಕಿಹೊಳಿ
ನವದೆಹಲಿ:
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ
ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಗೃಹ ಸಚಿವ
ಅಮಿತ್ ಶಾ ಅವರನ್ನು ಎರಡು ಬಾರಿ ಭೇಟಿಯಾಗಿ
ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಗೆ ತೆರಳಿರುವ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿ
ಹಾಗೂ ಇಂದು ಬೆಳಿಗ್ಗೆ ಎರಡು ಬಾರಿ ಅಮಿತ್ ಶಾ
ಅವರನ್ನು ಭೇಟಿಯಾಗಿದ್ದು, ದಾಖಲೆ ಸಮೇತ ಸಿಡಿ
ಪ್ರಕರಣದ ಬಗ್ಗೆ ವಿವರಿಸಿದ್ದಾರೆ.
ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ
ಮನವಿ ಮಾಡಿದ್ದಾರೆ.
ಅಲ್ಲದೇ ಸಿಬಿಐ ತನಿಖೆಗೆ ವಹಿಸುವುದರಿಂದ ಆಗುವ
ಸಾಧಕ ಬಾಧಕಗಳ ಬಗ್ಗೆಯೂ ವಿವರಿಸಿದ್ದಾರೆ. ಕೆಪಿಸಿಸಿ
ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಬಿಜೆಪಿ ನಾಯಕರು
ಸೇರಿದಂತೆ 100ಕ್ಕೂ ಹೆಚ್ಚು ಜನರ ಸಿಡಿಗಳಿದ್ದು, ಸಿಡಿ
ಮೂಲಕವೇ ರಾಜಕೀಯ ನಾಯಕರನ್ನು
ನಿಯಂತ್ರಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು
ಕಟ್ಟಿಹಾಕುವ ನಿಟ್ಟಿನಲ್ಲಿ ಪ್ರಕರಣ ಸಿಬಿಐಗೆ ವಹಿಸಿದರೆ
ಲಾಭವಾಗಲಿದೆ ಎಂಬುದನ್ನು ತಿಳಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ ಮನವಿಗೆ ಅಮಿತ್ ಶಾ
ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇನ್ನಷ್ಟು ಮಾಹಿತಿ
ಪಡೆದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು
ತಿಳಿದುಬಂದಿದೆ.