ಭದ್ರಾ ಮೇಲ್ದಂಡೆಗೆ ಕೇಂದ್ರದ ಅನುದಾನ ಸ್ವಾಗತಾರ್ಹ ಎಂದ ಸಂಜಯ ಪಾಟೀಲ
ಬೆಳಗಾವಿ:
ರಾಜ್ಯದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ 5ಸಾವಿರದ 3ನೂರು ಕೋಟಿ ರೂ.ಗಳ ಅನುದಾನ ನೀಡಿರುವದರೊಂದಿಗೆ ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಅಭಯ ನೀಡಿದೆ ಎಂದು ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಅವರು ಕೇಂದ್ರ ಸರ್ಕಾರದ ಬಜೆಟ್‍ನ್ನು ಸ್ವಾಗತಿಸಿದ್ದಾರೆ.
ಬುಧವಾರ ಕೇಂದ್ರ ಸರ್ಕಾರ ಮಂಡಿಸಿರುವ ಅಮೃತ ಕಾಲ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, 2023-24ನೇ ಸಾಲಿನ ಬಜೆಟ್ ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿದ್ದು, ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಕ್ರಮ ವಹಿಸಲಾಗಿದೆ. ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್’ ಸಂಸ್ಥೆಗೆ ಅಗತ್ಯ ನೆರವು ನೀಡಲಾಗಿದೆ.
ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳ ಹಾಗೂ ಬೆಳೆಪದ್ಧತಿ ಸುಧಾರಣೆಗಾಗಿ ‘ಶುದ್ಧ ಸಸಿ ಕಾರ್ಯಕ್ರಮ’, ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಪರಿಚಯ ಮಾಡುವ ಗುರಿ, ಯುವ ಉದ್ಯಮಿಗಳಿಂದ ಕೃಷಿ-ಸ್ಟಾರ್ಟಪ್‍ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿ ಸ್ಥಾಪನೆ, ಅಗ್ರಿ ಸ್ಟಾರ್ಟಪ್‍ಗಳನ್ನು ಉತ್ತೇಜಿಸಲು ಹೊಸ ನಿಧಿಯ ಘೋಷಣೆ ಮಾಡಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಒಂದು ಕೋಟಿ ರೈತರಿಗೆ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಲು ನೆರವು ಸಿಗಲಿದೆ.
ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗೆ ಒತ್ತು ನೀಡುವ ಮೂಲಕ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ. ಕಳೆದ ಆರು ವರ್ಷಗಳಲ್ಲಿ ದೇಶದ ಕೃಷಿ ಕ್ಷೇತ್ರವು ಸರಾಸರಿ ವಾರ್ಷಿಕ ಶೇ.4.6 ಬೆಳವಣಿಗೆ ದರದಲ್ಲಿ ಬೆಳೆಯುತ್ತಿದೆ ಎಂದು ತಿಳಿಸಿದ್ದಾರೆ.
63,000 ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿಗಳನ್ನು 2,561 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಗಣಕೀಕರಣಗೊಳಿಸಲಾಗುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರಿಗೆ ರೂ 2 ಲಕ್ಷದಷ್ಟು ಸಾಲವನ್ನು ನಗದು ರೂಪದಲ್ಲಿ ನೀಡಲು ಮತ್ತು ರೂ 2 ಲಕ್ಷದಷ್ಟು ಹಣವನ್ನು ನಗದು ರೂಪದಲ್ಲಿ ಕಟ್ಟಿಸಿಕೊಳ್ಳಲು ಅವಕಾಶ. ಒಂದು ಜಿಲ್ಲೆ ಒಂದು ಉತ್ಪನ್ನಕ್ಕೆ ಪ್ರೋತ್ಸಾಹ, ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗಾಗಿ ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ರೂ. 6,000 ಕೋಟಿ ಅನುದಾನ.
“ದೇಖೋ ಅಪ್ನಾ ದೇಶ್” ಪ್ರವಾಸೋದ್ಯಮಕ್ಕೆ ಹೊಸ ಯೋಜನೆ. ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ ಸಮ್ಮಾನ್-ಪಾರಂಪರಿಕ ಕುಶಲಕರ್ಮಿಗಳಿಗೆ ಸಹಾಯದ ಪ್ಯಾಕೇಜ್. ವಸತಿ ಕ್ಷೇತ್ರಕ್ಕೆ ಈ ವರ್ಷ ರೂ 79,000 ಕೋಟಿ ಅನುದಾನ ಘೋಷಣೆ. ರೈಲ್ವೆ ಇಲಾಖೆಯಲ್ಲಿ ರೂ 2.40 ಲಕ್ಷ ಕೋಟಿ ಬಂಡವಾಳ ಹೂಡಿಕೆ. ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯತಿ ನೀಡಿ, ಮಹಿಳೆಯರು, ಎಸ್‍ಸಿ, ಎಸ್‍ಟಿ ವರ್ಗದವರಿಗೆ, ಯುವಕರಿಗೆ ಪ್ರಮುಖ ಆದ್ಯತೆ ನೀಡಿ ಸಶಕ್ತ, ಸ್ವಾವಲಂಬಿ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಅಮೃತ ಕಾಲ ಬಜೆಟ್ ಅತ್ಯಂತ ಆಶಾದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಮಲ್ಲಿಕಾರ್ಜುನ ಮಾದಮ್ಮನವರ, ನೀತಿನ ಚೌಗಲೆ, ವೀರಭದ್ರಯ್ಯ ಪೂಜಾರ, ಸಂತೋಷ ದೇಶನೂರ ಇದ್ದರು.