BIG NEWS: ಗಡಿ ವಿವಾದ ಮತ್ತಷ್ಟು
ಉದ್ವಿಗ್ನ; KSRTC ಬಸ್, ವಾಹನಗಳ
ಮೇಲೆ ಶಿವಸೇನೆ ಪುಂಡರ ಕಲ್ಲು ತೂರಾಟ
ಪುಣೆ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತೀವ್ರ
ಸ್ವರೂಪ ಪಡೆದುಕೊಂಡಿದ್ದು, ಪುಣೆ ಡಿಪೋಗೆ ನುಗ್ಗಿದ
ಶಿವಸೇನೆ ಕಾರ್ಯಕರ್ತರು ಕೆ ಎಸ್ ಆರ್ ಟಿ ಸಿ ಬಸ್
ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ವಿಚಾರ
ಖಂಡಿಸಿ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್
ಬಳಿ ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಲಾರಿಗಳ ಮೇಲೆ
ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದ ಬೆನ್ನಲ್ಲೇ
ಇದೀಗ ಮಹಾರಾಷ್ಟ್ರದ ಪುಣೆಯಲ್ಲಿ ಶಿವಸೇನೆಯ
ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಕರ್ನಾಟಕದ
ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ, ಮಸಿ ಬಳಿದು
ಉದ್ಧಟತನ ಮೆರೆದಿದ್ದಾರೆ.
ಪುಣೆ ಡಿಪೋದಲ್ಲಿದ್ದ ಕೆ ಎಸ್ ಆರ್ ಟಿ ಸಿ 8 ಬಸ್ ಗಳ
ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು
ಪುಡಿಗೈದಿರುವ ಶಿವಸೇನೆ ಕಾರ್ಯಕರ್ತರು, ಬಸ್ ಗಳ
ಮೇಲೆ ಜೈ ಮಹಾರಾಷ್ಟ್ರ ಎಂದು ಬರೆದಿದ್ದಾರೆ. ಅಲ್ಲದೇ
ಕರ್ನಾಟಕ ನೋಂದಣಿಯಿರುವ ಕಾರುಗಳ ಮೇಲೂ
ದಾಳಿ ನಡೆಸಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ
ಭಾಗದಲ್ಲಿ ಪರಿಸ್ಥಿತಿ ಕ್ಷಣ ಕ್ಷಣಕ್ಕೂ ಉದ್ವಿಗ್ನಗೊಳ್ಳುತ್ತಿದ್ದು,
ಆತಂಕದ ವಾತಾವರಣ ನಿರ್ಮಾಣವಾಗಿದೆ.