Home / Crime / ಬೆಳಗಾವಿಯಲ್ಲಿ ಸಿಸಿಬಿ ದಾಳಿ; ₹5 ಲಕ್ಷ ಮೌಲ್ಯದ ಅಫೀಮು ಜಪ್ತಿ, ರಾಜಸ್ಥಾನದ ವ್ಯಕ್ತಿ ಬಂಧನ

ಬೆಳಗಾವಿಯಲ್ಲಿ ಸಿಸಿಬಿ ದಾಳಿ; ₹5 ಲಕ್ಷ ಮೌಲ್ಯದ ಅಫೀಮು ಜಪ್ತಿ, ರಾಜಸ್ಥಾನದ ವ್ಯಕ್ತಿ ಬಂಧನ

ಬೆಳಗಾವಿಯಲ್ಲಿ ಸಿಸಿಬಿ ದಾಳಿ; ₹5 ಲಕ್ಷ ಮೌಲ್ಯದ ಅಫೀಮು ಜಪ್ತಿ, ರಾಜಸ್ಥಾನದ ವ್ಯಕ್ತಿ ಬಂಧನ.

ಬೆಳಗಾವಿ: ನಗರದ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ₹5 ಲಕ್ಷ ಮೌಲ್ಯದ ಅಫೀಮು (ಒಪಿಯಂ) ಜಪ್ತಿ ಮಾಡಲಾಗಿದ್ದು, ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ನಾಯ್ಕ ಅವರ ನೇತೃತ್ವದ ತಂಡವು ಜೂನ್ 18ರಂದು ಎನ್‌ಎಚ್-48ರ ಹಿಂದಾಲ್ಕೋ ಕಾರ್ಖಾನೆ ಸಮೀಪದ ಸರ್ವಿಸ್ ರಸ್ತೆಯಲ್ಲಿ ದಾಳಿ ನಡೆಸಿತು. ಈ ವೇಳೆ ರಾಜಸ್ಥಾನದ ಪಾಲಿ ನಿವಾಸಿ ಶುಭಂ ಮದನಲಾಲ್ ಶರ್ಮಾ (29) ಎಂಬಾತನನ್ನು ವಶಕ್ಕೆ ಪಡೆಯಲಾಯಿತು.

ಪೊಲೀಸರ ಪ್ರಕಾರ, ಆರೋಪಿ ರಾಜಸ್ಥಾನದಿಂದ ಅಫೀಮನ್ನು ತಂದು ಬೆಂಗಳೂರಿನ ಖೇತರಾಮ್ ಚೌಧರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದನು. ಕಾರ್ಯಾಚರಣೆ ವೇಳೆ ಆರೋಪಿಯಿಂದ 1.048 ಕೆ.ಜಿ. ತೂಕದ ಕಪ್ಪು ಬಣ್ಣದ ದ್ರವರೂಪದ ಅಫೀಮು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹5 ಲಕ್ಷ ಎಂದು ತಿಳಿದುಬಂದಿದೆ.

ಇದಲ್ಲದೆ ಆರೋಪಿಯಿಂದ ₹50 ಸಾವಿರ ಮೌಲ್ಯದ ಐಫೋನ್ 14 ಪ್ಲಸ್ ಮೊಬೈಲ್ ಫೋನ್‌ನ್ನು ಸಹ ಜಪ್ತಿ ಮಾಡಲಾಗಿದೆ. ಒಟ್ಟಾರೆ ಜಪ್ತಿ ಮಾಡಲಾದ ವಸ್ತುಗಳ ಮೌಲ್ಯ ಸುಮಾರು ₹5.5 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ, 1985ರ ಕಲಂ 18(ಬಿ) ಅಡಿಯಲ್ಲಿ ಅಪರಾಧ ಸಂಖ್ಯೆ 139/2026 ದಾಖಲಿಸಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.