ಮನೆ ಇಲ್ಲದ ಗ್ರಾಮೀಣ, ನಗರದ ಜನತೆಗೆ
ಗುಡ್ ನ್ಯೂಸ್: ವಸತಿ ಯೋಜನೆ
ಸಹಾಯಧನ ಮೊತ್ತ 5 ಲಕ್ಷ ರೂ.ಗೆ ಹೆಚ್ಚಳ
27 Dec 22 . 6:50 AM
ಬೆಳಗಾವಿ(ಸುವರ್ಣಸೌಧ): ವಸತಿ ಯೋಜನೆ
ಸಹಾಯಧನ ಮೊತ್ತ ಹೆಚ್ಚಳ ಮಾಡಲಾಗುವುದು ಎಂದು
ವಸತಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ
ಉತ್ತರ ನೀಡಿದ ಸಚಿವರು, ವಿವಿಧ ವಸತಿ
ಯೋಜನೆಗಳಡಿ ಮನೆ ನಿರ್ಮಿಸಿಕೊಳ್ಳಲು ಅರ್ಹ
ಫಲಾನುಭವಿಗಳಿಗೆ ನೀಡುತ್ತಿರುವ ಸಹಾಯಧನದ
ಮೊತ್ತವನ್ನು ಗ್ರಾಮೀಣ ಪ್ರದೇಶದಲ್ಲಿ 3 ಲಕ್ಷ ರೂ.
ಹಾಗೂ ನಗರ ಪ್ರದೇಶದಲ್ಲಿ 5 ಲಕ್ಷ ರೂ.ಗೆ ಹೆಚ್ಚಳ
ಮಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ
ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರ್ಕಾರ 1.20 ಲಕ್ಷ ರೂ.
ನೀಡುತ್ತಿದ್ದು ಆರ್ಥಿಕ ಸಹಾಯದಿಂದ ಪಾಯ ನಿರ್ಮಾಣ
ಸಾಧ್ಯವಿಲ್ಲ. ಹತ್ತಾರು ವರ್ಷಗಳಿಂದ ಸಹಾಯಧನದ
ಪ್ರಮಾಣ ಪರಿಷ್ಕರಿಸಿಲ್ಲ. ಹೀಗಾಗಿ 5 ಲಕ್ಷ ರೂ. ಮನೆ
ನಿರ್ಮಿಸುವ ಬದಲು 3 ಲಕ್ಷ ಮನೆ ನಿರ್ಮಿಸಿದರೂ
ಅಡ್ಡಿಯಿಲ್ಲ. ಗ್ರಾಮೀಣ ಭಾಗದ ಫಲಾನುಭವಿಗಳಿಗೆ 3
ಲಕ್ಷ ರೂ. ಹಾಗೂ ನಗರ ಪ್ರದೇಶದ ಫಲಾನುಭವಿಗಳಿಗೆ
5 ಲಕ್ಷ ರೂ. ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ
ಚರ್ಚಿಸುವುದಾಗಿ ಸೋಮಣ್ಣ ಭರವಸೆ ನೀಡಿದ್ದಾರೆ.