ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿಸುದ್ದಿ ; ಶೀಘ್ರ ‘OPS ಸವಲತ್ತು’ಗಳು ಜಾರಿ |Old Pension Scheme
ನವದೆಹಲಿ :
ಇತ್ತೀಚೆಗಷ್ಟೇ ಡಿಎ ಹೆಚ್ಚಳದ ಸಂತಸದಸುದ್ದಿ ಪಡೆದ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಂತಿದೆ. ಪ್ರಸ್ತುತ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ಪದ್ದತಿ ಜಾರಿಯಾಗುತ್ತಿದೆ. ತಮಗೂ ಹಳೆಯ ಪಿಂಚಣಿ ವ್ಯವಸ್ಥೆಯೇ ಬೇಕು ಎಂದು ಕೇಂದ್ರ ಸರ್ಕಾರಿ ನೌಕರರ ಬೇಡಿಕೆಯಾಗಿತ್ತು.
ಇದಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ಸಮಿತಿ ರಚಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನ ಮಾಡಿ ನೌಕರರಿಗೆ ಹೆಚ್ಚು ಅನುಕೂಲವಾಗುವಂತೆ ಮಾಡಲು ಸರ್ಕಾರ ಯೋಜಿಸುತ್ತಿದೆ.
ಹಳೆ ಪಿಂಚಣಿ ಯೋಜನೆ ಜಾರಿಗೆ ತರುವಂತೆ ದೇಶಾದ್ಯಂತ ಕೇಂದ್ರ ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿವೆ. ಪ್ರಸ್ತುತ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಆಯಾ ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಪದ್ಧತಿಯನ್ನ ಜಾರಿಗೆ ತರುತ್ತಿವೆ. ಇದು ಕೇಂದ್ರ
ಸರ್ಕಾರದ ಮೇಲೆ ಒತ್ತಡವನ್ನೂ ಹೆಚ್ಚಿಸಿದೆ. ಹಣಕಾಸು ಸಚಿವಾಲಯವು ಹೊಸ ಪಿಂಚಣಿ ಯೋಜನೆಯಲ್ಲಿ ಖಾತರಿಪಡಿಸಿದ ಆದಾಯವನ್ನ ಪರಿಶೀಲಿಸುತ್ತಿದೆ.ಇದರಲ್ಲಿ ಹೊಸ ಪಿಂಚಣಿ ಯೋಜನೆಯಲ್ಲಿ ನೌಕರರು ಹಳೆ ಪಿಂಚಣಿ ಪಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ.
ಹೊಸ ಪಿಂಚಣಿ ಯೋಜನೆಯಲ್ಲಿ ಕನಿಷ್ಠ ಖಾತರಿ ಪಿಂಚಣಿ ವ್ಯವಸ್ಥೆಯನ್ನ ಪರಿಚಯಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರಿ ನೌಕರರಿಗೂ ಹೆಚ್ಚುವರಿ ಸೌಲಭ್ಯ ಸಿಗುತ್ತದೆ. ಇದರೊಂದಿಗೆ ಸರ್ಕಾರವು ತನ್ನ ಕೊಡುಗೆಯನ್ನ ಶೇ 14 ಕ್ಕಿಂತ ಹೆಚ್ಚು ಹೆಚ್ಚಿಸಲು ಯೋಜಿಸುತ್ತಿದೆ. ಬೊಕ್ಕಸಕ್ಕೆ ಹೊರೆಯಾಗದಂತೆ ಕೊಡುಗೆಯನ್ನ ಹೇಗೆ ಹೆಚ್ಚಿಸಬಹುದು ಎಂಬ ಬಗ್ಗೆ ಸರ್ಕಾರ ಚರ್ಚೆ ನಡೆಸುತ್ತಿದೆ. ಹಳೆಯ ಪಿಂಚಣಿ ಯೋಜನೆಯ ದೊಡ್ಡ ಪ್ರಯೋಜನವೆಂದರೆ ಪಿಂಚಣಿಯು ಕೊನೆಯದಾಗಿ ಪಡೆದ ಸಂಬಳವನ್ನ ಆಧರಿಸಿದೆ. ಹಣದುಬ್ಬರದ ದರ ಹೆಚ್ಚಾದಂತೆ ಡಿಆರ್ಕೂಡ ಹೆಚ್ಚಾಗುತ್ತದೆ. ಸರ್ಕಾರ ಹೊಸ ವೇತನ ಆಯೋಗ ಜಾರಿಗೆ ತಂದರೆ, ಪಿಂಚಣಿ ಮೊತ್ತವೂ ಹೆಚ್ಚಾಗಲಿದೆ.
ಅದಕ್ಕಾಗಿಯೇ ಕೇಂದ್ರ ಸರ್ಕಾರಿ ನೌಕರರು ಹಳೆಯ ಪಿಂಚಣಿ ವ್ಯವಸ್ಥೆಗೆ ಆದ್ಯತೆ ನೀಡುತ್ತಾರೆ.ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಹಣಕಾಸು ಮಸೂದೆ 2023 ಅನ್ನು ಮಂಡಿಸುವಾಗ ಪಿಂಚಣಿ ಯೋಜನೆಯನ್ನ ಹೆಚ್ಚು ಆಕರ್ಷಕಗೊಳಿಸಲಾಗುವುದು ಎಂದು ಘೋಷಿಸಿದರು. ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆರ್ಥಿಕ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚಿಸಲಾಗುತ್ತಿದೆ ಎಂದು ತಿಳಿಸಿದರು. ಈ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಹೊಸ ಪಿಂಚಣಿ ನೀತಿಗಳನ್ನ ರೂಪಿಸಲಾಗುವುದು. ನೌಕರರ ಅಗತ್ಯಗಳನ್ನು ಪೂರೈಸುವ ಪಿಂಚಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಅವರು ಬಯಸುತ್ತಾರೆ ಎಂದು ಹೇಳಿದರು.