ಕಾಂಗ್ರೆಸ್‌ನಿಂದ 4ನೇ ಗ್ಯಾರಂಟಿ ಘೋಷಣೆ: ಯುವಕ, ಯುವತಿಯರಿಗೆ 3 ಸಾವಿರ ನಿರುದ್ಯೋಗ ಭತ್ಯೆ
ಬೆಳಗಾವಿ: ಮುಂಬರುವ ವಿಧಾನಸಭೆ ಚುನಾವಣೆಗೆ ಮತಬೇಟೆ ಆರಂಭಿಸಿರುವ ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿಯನ್ನು ಘೋಷಿಸಿದೆ. ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಈ ಘೋಷಣೆ ಮಾಡಲಾಗಿದೆ.
ಇಲ್ಲಿ ನಡೆಯುತ್ತಿರುವ ಯುವ ಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಲ್ಕನೇ ಖಾತರಿಯನ್ನು ಘೋಷಿಸಿದ್ದು, ಯುವ ಮತದಾರರಿಗೆ ಮಣೆ ಹಾಕಿದೆ.ನಿರುದ್ಯೋಗ ಯುವಕರಿಗೆ ನೆರವು ನೀಡಲು “ಯುವ ನಿಧಿ” ಯೋಜನೆಯನ್ನು ಜಾರಿ ಮಾಡಲಾಗುವುದು ಎಂದು ಪಕ್ಷ ಘೋಷಣೆ ಮಾಡಿದೆ.
ರಾಜ್ಯದ ಯುವಕರಿಗೆ ನಿರುದ್ಯೋಗ ಭತ್ಯೆಯಾಗಿ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಪದವೀಧರ ಯುವಕ/ ಯುವತಿಯರಿಗೆ 2 ವರ್ಷಗಳವರೆಗೆ 3 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಎಂಬಿ ಪಾಟೀಲ್, ಆರ್ ವಿ ದೇಶಪಾಂಡೆ ಸೇರಿದಂತೆ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿದ್ದರು.
ಇದಕ್ಕೂ ಮೊದಲು ಕಾಂಗ್ರೆಸ್, ಕುಟುಂಬದ ಯಜಮಾನತಿಗೆ 2 ಸಾವಿರ ರೂಪಾಯಿ, ಪ್ರತಿ ಮನೆಗೆ 200 ಯೂನಿಟ್‌ವರೆಗೂ ವಿದ್ಯುತ್ ಉಚಿತ, 10 ಕೆಜಿ ಅಕ್ಕಿ ಘೋಷಣೆಯನ್ನು ಮಾಡಿತ್ತು. ಇಂದು ನಾಲ್ಕನೇ ಗ್ಯಾರಂಟಿಯಾಗಿ ನಿರುದ್ಯೋಗ ಯುವಕರಿಗೆ 3 ಸಾವಿರ ರೂಪಾಯಿ ನೀಡುವುದಾಗಿ ಹೇಳಿದೆ.