ಬೆಳಗಾವಿ ಎಂಇಎಸ್‌ನಿಂದ ಶಿವಾಜಿ ಪ್ರತಿಮೆ ‘ಶುದ್ದೀಕರಣ’
ಬೆಳಗಾವಿ:
‘ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಪ್ರತಿಮೆಯನ್ನು ಬಳಸಿಕೊಂಡು,ಶಿವಾಜಿ ಮಹಾರಾಜರಿಗೆ ಅಪಚಾರ ಎಸಗಿದ್ದಾರೆ’ ಎಂದು ಆರೋಪಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್), ರಾಜಹಂಸಗಡ ಕೋಟೆಯಲ್ಲಿ ಭಾನುವಾರ ಪ್ರತಿಮೆ ಶುದ್ದೀಕರಣಗೊಳಿಸಿತು. ಸಾವಿರಾರು ಜನರು ಇದಕ್ಕೆ ಸಾಕ್ಷಿಯಾದರು.ಈಗಾಗಲೇ ಎರಡು ಬಾರಿ ಅನಾವರಣಗೊಂಡಿದ್ದ ಶಿವಾಜಿ
ಪ್ರತಿಮೆ ‘ಶುದ್ದೀಕರಣ’ ನೆಪದಲ್ಲಿ ಸೇರಿದ ಮರಾಠಿಗರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮರಾಠಿಗರೆಲ್ಲ ಒಂದಾಗಿರುತ್ತೇವೆ’ ಎಂದೂ ಸಂಕಲ್ಪ ಮಾಡಿದರು.ಶಿವಾಜಿ ಪ್ರತಿಮೆ ಲೋಕಾರ್ಪಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆ ವಿಷಯವಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ರಾಜಕೀಯ ಜಿದ್ದಿಗೆ ಬಿದ್ದಿರುವ ಶಾಸಕ ರಮೇಶ ಜಾರಕಿಹೊಳಿ, ಮಾರ್ಚ್ 2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ರಾಜಹಂಸಗಡಕ್ಕೆ ಆಹ್ವಾನಿಸಿ ಪ್ರತಿಮೆ ಉದ್ಘಾಟಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರತಿಯಾಗಿ ಲಕ್ಷ್ಮಿ ಹೆಬ್ಬಾಳಕರ ಅವರು, ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ ಅವರನ್ನು ಮಾರ್ಚ್ 5ರಂದು ಇಲ್ಲಿಗೆ ಕರೆಯಿಸಿ ಮತ್ತೊಮ್ಮೆ ಪ್ರತಿಮೆ ಉದ್ಘಾಟಿಸಿದ್ದರು.