ಬೆಳಗಾವಿಗೆ ರಾಹುಲ್ ಗಾಂಧಿ ಆಗಮನ; ಸಿಪಿಎಡ್ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ:
ಬೆಳಗಾವಿ ನಗರಕ್ಕೆ ಮಾ. 20ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು ನಗರದ ಸಿಪಿಎಡ್ ಮೈದಾನಕ್ಕೆ ಭೇಟಿ ನೀಡಿ ಸಮಾವೇಶ ನಡೆಯುವ ಸ್ಥಳ ಹಾಗೂ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ರೈತ ಸಮಾವೇಶ, ಮಹಿಳಾ ಸಮಾವೇಶ ಮಾಡಲಾಗಿದ್ದು, ಈಗ ಬೆಳಗಾವಿಯಲ್ಲಿ ಯುವ ಸಮಾವೇಶ ಮಾಡಲಾಗುತ್ತಿದೆ. ಸಮಾವೇಶಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿದ್ದು,ಯುವಕರಿಗೆ ಹೊಸ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.
ಬೆಳಗಾವಿ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ರೋಡ್ ಶೋ ಮಾಡುವ ಬಗ್ಗೆ ಇನ್ನು ಖಚಿತವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದೇವೆ ಜಿಲ್ಲೆಯಲ್ಲಿಯೂ 10ರಿಂದ 12 ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದು ತಿಳಿಸಿದರು.
ಯುವಕರನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಪಕ್ಷ ಸದಾ ಬದ್ಧವಿದೆ. ಸಮಾವೇಶದಲ್ಲಿ ರಾಹುಲ್ ಗಾಂಧಿಯವರು ಯುವಕರಿಗಾಗಿ ಎರಡು ಘೋಷಣೆಗಳನ್ನು ಘೋಷಿಸಲಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಪ್ರಧಾನಿ ಮೋದಿಯವರು ವರ್ಷಕ್ಕೆ 2ಕೋಟಿ ಜನ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಅವರ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳನ್ನು ಈಡೇರಿಸದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ತಿಳಿಸಿದರು.