ಹೆಬ್ಬಾಳ್ಕರ್ ಆಸೆಗೆ ತಣ್ಣೀರು ಎರಚಿದ ರಮೇಶ್ ಜಾರಕಿಹೊಳಿ : ಮಾ.2 ಕ್ಕೆ ಛತ್ರಪತಿ ಶಿವಾಜಿ ಮೂರ್ತಿ ಉದ್ಘಾಟನೆ
ಬೆಳಗಾವಿ :
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿ ನಿರ್ಮಿಸಿರುವ ಶಿವಾಜಿ ಮೂರ್ತಿ ಉದ್ಘಾಟನೆ ಹಗ್ಗ ಜಗ್ಗಾಟ ಕೊನೆಗೂ ಒಂದು ಹಂತ ತಲುಪಿದ್ದು, ಶಾಸಕ ರಮೇಶ್ ಜಾರಕಿಹೊಳಿ ಹೇಳಿದಂತೆ ಮಾರ್ಚ್ 2 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೂರ್ತಿ ಅನಾವರಣ ಮಾಡಲಿದ್ದಾರೆ.
ಈ ಕುರಿತು ಜಿಲ್ಲಾಡಳಿತ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೆಆರ್ ಐಡಿಎಲ್ ಬೆಳಗಾವಿ ಸಹಯೋಗದಲ್ಲಿ ಮೂರ್ತಿ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ಶಿವಾಜಿ ಮೂರ್ತಿ ಉದ್ಘಾಟನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಾಂಗ್ರೆಸ್ ಹಿರಿಯ ಮುಖಂಡರನ್ನು ಆಹ್ವಾನಿಸುವ ಮೂಲಕ ಬೃಹತ್ ಕಾರ್ಯಕ್ರಮದ ಸಿದ್ಧತೆ ನಡೆಸಿದ್ದರು.
ಆದರೆ ಶಾಸಕಿ ಹೆಬ್ಬಾಳ್ಕರ್ ಯಾವಾಗ ಇದು ಕಾಂಗ್ರೆಸ್ ಸಮಾರಂಭ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದಿದ್ದೆ ತಡ ಶಾಸಕ ರಮೇಶ್ ಜಾರಕಿಹೊಳಿ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಸರ್ಕಾರಿ ಅನುದಾನದಲ್ಲಿ ನಿರ್ಮಾಣವಾದ ಛತ್ರಪತಿ ಶಿವಾಜಿ ಮೂರ್ತಿಯನ್ನು ಸರ್ಕಾರದ ಶಿಷ್ಟಾಚಾರ ಅಡಿಯಲ್ಲಿ ಉದ್ಘಾಟನೆ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದರು. ಸಧ್ಯ ಬರುವ ಮಾರ್ಚ್ 2 ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೂರ್ತಿ ಉದ್ಘಾಟನೆ ಮಾಡಲಿದ್ದಾರೆ.
ಮಾರ್ಚ್ 5 ರಂದು ರಾಜಹಂಸಗಡ ಕೋಟೆ ಆವರಣದಲ್ಲಿ ನಿರ್ಮಾಣವಾದ ಶಿವಾಜಿ ಮೂರ್ತಿ ಉದ್ಘಾಟನೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೃಹತ್ ಕಾರ್ಯಕ್ರಮ ನೆರವೇರಿಸಲು ತಯಾರಿ ನಡೆಸಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಹೊಂದಿದ್ದರು. ಯಾವಾಗ ರಮೇಶ್ ಜಾರಕಿಹೊಳಿ ಅಖಾಡಕ್ಕೆ ಇಳಿದರು ಆಗ ಹೆಬ್ಬಾಳ್ಕರ್ ಗೆ ಹಿನ್ನಡೆ ಉಂಟಾಗಿದೆ.